ಆಹಾರ -
ಜೀವಿಯನ್ನು ಜೀವಂತವಾಗಿ ಉಳಿಸಿಕೊಂಡು, ದಿನದ ಚಟುವಟಿಕೆಗಳಿಗೆ ಶಕ್ತಿಯನ್ನು ಕೊಟ್ಟು, ಸವೆದ ಹಾಳಾದ ಅಂಗಭಾಗಗಳನ್ನು ಸರಿಪಡಿಸಲು ನೆರವಾಗುವ, ಮೈಗೆ ಪುಷ್ಟಿ ಕೊಡುವ ವಸ್ತುಗಳ ಸಮುದಾಯ. 
ಆಹಾರ ವಸ್ತುಗಳು : ಇವನ್ನು ಮುಖ್ಯವಾಗಿ 9 ಭಾಗಗಳಾಗಿ ವಿಂಗಡಿಸಬಹುದು. 1. ಅಕ್ಕಿ, ರಾಗಿ, ಜೋಳ, ಗೋದಿ, ಮುಸುಕಿನ ಜೋಳ, ನವಣೆ, ಹಾರಕ, ಸಜ್ಜೆ, ಜವೆಗೋದಿ, ಬಾರ್ಲಿ ಮುಂತಾದ ಧಾನ್ಯಗಳು; ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿ. 2. ತೊಗರಿ, ಉದ್ದು, ಕಡಲೆ, ಅವರೆ, ಹೆಸರು, ತಡಗುಣಿ ಮುಂತಾದ ಬೇಳೆಕಾಳುಗಳು 3. ತೆಂಗಿನಕಾಯಿ, ಎಳ್ಳು, ಕುಸುಬಿ, ಕಡಲೆಕಾಯಿಬೀಜ, ಬಾದಾಮಿ, ಗೋಡಂಬಿ ಮುಂತಾದ ಎಣ್ಣೆ ಕೊಡುವ ಬೀಜಗಳು; ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ, ಬೆಣ್ಣೆ, ತುಪ್ಪ ಮುಂತಾದ ಜಿಡ್ಡು ವಸ್ತುಗಳು; ಹಾಲು, ಮೊಸರು, ಮಜ್ಜಿಗೆ 4. ಬಗೆಬಗೆಯ ಸೊಪ್ಪುಗಳು, ಹಸುರೆಲೆ ತರಕಾರಿಗಳು; ಆಲೂಗೆಡ್ಡೆ, ಮರಗೆಣಸು, ಸಿಹಿಗೆಣಸು, ಬದನೆ, ಬೆಂಡೆ, ಹುರುಳಿ, ಗೋರೀಕಾಯಿ, ಸೌತೇಕಾಯಿ ಮುಂತಾದ ತರಕಾರಿಗಳು. 5. ಮಾವು, ಪರಂಗಿ, ಸೀಬೆ, ಕಿತ್ತಳೆ, ನಿಂಬೆ, ದ್ರಾಕ್ಷಿ ಮುಂತಾದ ಹಸಿಯ ಹಣ್ಣುಗಳು. 6. ಮೀನು, ಕೋಳಿ, ಕುರಿ, ಬಾತು, ಹಂದಿಗಳ ಮಾಂಸಗಳು; ಮೊಟ್ಟೆ, ಮೀನು ಮುಂತಾದ ಪ್ರೋಟೀನ್‍ಗಳಿರುವ ವಸ್ತುಗಳು. 

ಸಮತೋಲ ಆಹಾರ : ಪುಷ್ಟಿಕರ ಅಂಶಗಳನ್ನು ಕೂಡಿಸಿ ಆಹಾರವನ್ನು ಸರಿದೂಗಿಸಬೇಕು. ಅದು ಅವರವರ ಮೈಗುಣ, ವಯಸ್ಸು, ಪರಿಸರ, ಕೆಲಸಗಳಿಗೆ ತಕ್ಕಂತೆ ಬೇರೆ ಬೇರೆಯಾಗಿರಬೇಕು. ಸಮತೋಲ ಆಹಾರದಲ್ಲಿ ಸಾಕಷ್ಟು ಜೀವಾತುಗಳೂ ಕಬ್ಬಿಣ, ಸುಣ್ಣ, ರಂಜಕಗಳ ರೀತಿಯ ಲೋಹ ಪದಾರ್ಥಗಳೂ ಇರುತ್ತವೆ. 
												(ಬಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ